ಆರಂಭ

2008ರಲ್ಲಿ ‘ಸ್ಪಂದನ ಇತಿಹಾಸ ವೇದಿಕೆ’ ಯ ಮೂಲಕ ತ್ರೈಮಾಸಿಕ  ಸಂಚಿಕೆಯಾಗಿ ಬಿಡುಗಡೆಗೊಂಡ ‘ಇತಿಹಾಸ ದರ್ಪಣ’ , ಇಂದು ಕನ್ನಡ ನಾಡಿನ ವಿದ್ವತ್ ಲೋಕದ ಗಮನಸೆಳೆಯುತ್ತಿದೆ. ಇತಿಹಾಸ ಕ್ಷೇತ್ರದಲ್ಲಿ ಹಿರಿಯ ವಿದ್ವಾಂಸರ  ಮತ್ತು ಯುವ ಸಂಶೋಧಕರ ಬರವಣಿಗೆಗೆ ವೇದಿಕೆ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ಸಂಸ್ಥೆಯ ಮೂಲ ಧ್ಯೇಯೋದ್ದೇಶಗಳು ಇಂತಿವೆ.

ಉದ್ದೇಶ

  • ಹೊಸ ಶೋಧನೆ, ವಿನೂತನ ವಿಶ್ಲೇಷಣೆ, ಆಲೋಚನೆ ಹಾಗೂ ಸಂಶೋಧನಾ ವಿಧಾನಗಳಿಂದಾಗಿ ಹೊಸತನದಿಂದ ಕೂಡಿದ ಮತ್ತು ಚರಿತ್ರೆಯ ಅಧ್ಯಯನದ ಮೇಲೆ ಹೊಸಬೆಳಕು ಚೆಲ್ಲುವಂತಹ ಗುಣಾತ್ಮಕ ಲೇಖನಗಳನ್ನು ಪ್ರಕಟಿಸುವ ಮೂಲಕ ಆಸಕ್ತರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಚರಿತ್ರೆಯ ಅಭಿರುಚಿಯನ್ನು ಬೆಳೆಸುವುದು.
  • ಹೊಸ ತಲೆಮಾರಿನ ಇತಿಹಾಸ ಸಂಶೋಧಕರ ಬರವಣಿಗೆಗಳಿಗೆ ವೇದಿಕೆಯನ್ನು ಕಲ್ಪಿಸುವುದು.
  • ಹಿರಿಯ ಮತ್ತು ಕಿರಿಯ ಇತಿಹಾಸ ಸಂಶೋಧಕರನ್ನು ಒಂದೇ ವೇದಿಕೆಯಲ್ಲಿ ತರುವುದು.
  • ಎಂ.ಫಿಲ್, ಪಿಎಚ್.ಡಿ ನಡೆಸುತ್ತಿರುವ ಸಂಶೋಧನಾ ವಿದ್ಯಾರ್ಥಿಗಳ ಉತ್ತಮ ಲೇಖನಗಳ ಪ್ರಕಟಣೆಗೆ ಅವಕಾಶ ಕಲ್ಪಿಸಿಕೊಡುವುದು.
  • ಕನ್ನಡದಲ್ಲಿ ಇತಿಹಾಸ ಸಂಶೋಧನಾ ನಿಯತಕಾಲಿಕೆಯ ಕೊರತೆಯನ್ನು ಸ್ವಲ್ಪ ಮಟ್ಟಿಗಾದರೂ ನೀಗಿಸುವುದು.
  • ಕರ್ನಾಟಕದಲ್ಲಿ ಗುಣಾತ್ಮಕ ಇತಿಹಾಸ ಸಂಶೋಧನೆಗಳನ್ನು ನಡೆಸಲು ಬೆಂಬಲವಾಗಿ ನಿಲ್ಲುವುದು.

ಇತಿಹಾಸ ದರ್ಪಣ ತಂಡ

ಹಂ.ಗು. ರಾಜೇಶ್

ಸಂಪಾದಕರು

ಹಂ.ಗು. ರಾಜೇಶ್ : (ಜ. 1982) ಕುಣಿಗಲ್ ತಾಲ್ಲೂಕ್, ಹುಲಿಯೂರು ದುರ್ಗ ಹೋಬಳಿ, ಹಂದಲಗೆರೆ ಗ್ರಾಮದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ, ಬಿ.ಎಡ್ ಪದವಿ ಪಡೆದ ಇವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಾಸನ ತರಗತಿಯಲ್ಲಿ ಡಿಪ್ಲೊಮಾ ಪದವಿ ಪಡೆದಿರುತ್ತಾರೆ. ರಾಜ್ಯ ಉಪನ್ಯಾಸಕ ಅರ್ಹತಾ ಪರೀಕ್ಷೆ (SLET)ಯಲ್ಲಿಯೂ ತೇರ್ಗಡೆ ಹೊಂದಿರುತ್ತಾರೆ. ಪ್ರಸ್ತುತ ಸರ್ಕಾರಿ ಪದವಿ ಪೂರ್ವ ಕಾಲೇಜು, ದೊಡ್ಡೇರಿ, ಬೆಂಗಳೂರು ದಕ್ಷಿಣ ತಾಲ್ಲೂಕು, ಇಲ್ಲಿ ಇತಿಹಾಸ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ ಸಂಶೋಧನೆಯಲ್ಲಿಯೂ ತೊಡಗಿದ್ದಾರೆ.

ಇತಿಹಾಸ ಸಂಶೋಧನೆ ಮತ್ತು ಪುರಾತತ್ತ್ವ ಅಧ್ಯಯನ ಇವರ ಆಸಕ್ತ ಕ್ಷೇತ್ರಗಳು. ‘ಇತಿಹಾಸ ದರ್ಪಣ’ ತ್ರೈಮಾಸಿಕದ ಸಂಸ್ಥಾಪಕ ಸಂಪಾದಕರಾಗಿ ಕಳೆದ ಹತ್ತು ವರ್ಷಗಳಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ‘ಇತಿಹಾಸ -೨’, ‘ಮೌನಕ್ರಾಂತಿ: ಸಮಕಾಲೀನ ಪ್ರತಿಕ್ರಿಯೆಗಳು’ ಇವರ ಸ್ವತಂತ್ರ ಕೃತಿಗಳು. 20ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ವಿವಿಧ ಕಡೆಗಳಲ್ಲಿ ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿ ವತಿಯಿಂದ ಹೊರಬಂದ ‘ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಯ ಕೆಲವು ನೆಲೆಗಳು’ ಯೋಜನೆಯಲ್ಲಿ 12 ಸಂಪುಟಗಳ ಉಪಸಂಪಾದಕರಾಗಿ ದುಡಿದಿದ್ದಾರೆ. ಪ್ರಥಮ ಪಿ.ಯು.ಸಿ. ಮತ್ತು 6-7ನೇ ತರಗತಿಗಳ ಇತಿಹಾಸ ಪಠ್ಯ ಪುಸ್ತಕ ರಚನಾ ಸಮಿತಿ ಮತ್ತು ಪರಿಷ್ಕರಣಾ ಸಮಿತಿಗಳಲ್ಲಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಸುಂಕಂ ಗೋವರ್ಧನ್

ಉಪ ಸಂಪಾದಕರು

ಬೆಂಗಳೂರಿನಲ್ಲಿ 1979ರಲ್ಲಿ ಜನಿಸಿದ ಸುಂಕಂ ಗೋವರ್ಧನ ಅವರು ಮೈಸೂರಿನ ಕ.ರಾ.ಮು. ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಕೆಸೆಟ್ ಮತ್ತು ಎನ್‍ಇಟಿ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಬಿ.ಎಂ.ಶ್ರೀ ಪ್ರತಿಷ್ಟಾನ ನಡೆಸುವ ಹಸ್ತಪ್ರತಿ ಶಾಸ್ತ್ರ ಹಾಗೂ ಕನ್ನಡ ಭಾಷಾಶಾಸ್ತ್ರ ತರಗತಿಗಳಲ್ಲೂ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಶಾಸನ ಶಾಸ್ತ್ರ ಡಿಪ್ಲೋಮೋ ಪದವಿಗಳಲ್ಲಿ ರ್ಯಾಂಕ್‍ನೊಂದಿಗೆ ತೇರ್ಗಡೆಯಾಗಿದ್ದಾರೆ.
ಇವರ ಆಸಕ್ತಿಯ ಕ್ಷೇತ್ರ ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕಲೆ ಮತ್ತು ವಾಸ್ತುಶಿಲ್ಪ. ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಯವರು ನಡೆಸುವ ಇತಿಹಾಸ ಮತ್ತು ಪುರಾತತ್ವ ಸಮಾವೇಶಗಳು, ವಿಜಯನಗರ ಅಧ್ಯಯನಗಳು, ಕರ್ನಾಟಕ ಇತಿಹಾಸ ಅಕಾದೆಮಿಯ ವಾರ್ಷಿಕ ವಿದ್ವತ್ ಸಭೆಗಳು, ಬಿ.ಎಂ.ಶ್ರೀ ಪ್ರತಿಷ್ಟಾನದ ಹಸ್ತಪ್ರತಿ ಸಮಾವೇಶಗಳು, ಹಾಗೂ ಇನ್ನಿತರ ಸಮಾವೇಶಗಳಲ್ಲಿ 30ಕ್ಕೂ ಹೆಚ್ಚಿನ ಪ್ರಬಂಧಗಳನ್ನು ಇವರು ಮಂಡಿಸಿರುತ್ತಾರೆ. ಹಾಗೂ ನಾಡಿನ ಅತ್ಯಂತ ಗಣ್ಯ ಸಾಹಿತ್ಯಿಕ ಪತ್ರಿಕೆಗಳಲ್ಲಿ, ಅಭಿನಂದನಾ ಗ್ರಂಥಗಳಲ್ಲಿ ಹಾಗೂ ಇತಿಹಾಸ ದರ್ಪಣವೇ ಮುಂತಾದ ಇನ್ನಿತರ ನಿಯತಕಾಲಿಕೆಗಳಲ್ಲಿ ಇವರು ಪ್ರಕಟಿಸಿರುವ ಲೇಖನಗಳ ಸಂಖ್ಯೆಯೇ ಸುಮಾರು 80ನ್ನು ದಾಟುತ್ತದೆ. ಇವರ ಪ್ರಕಟಿತ ಕೃತಿಗಳು ಕಾವೇರಿ ನದಿ ತಲಕಾವೇರಿಯಿಂದ ಪೂಂಪುಹಾರ್‍ವರೆಗೆ, ಕನ್ನಡ ನಾಡಿನ ಪ್ರಮುಖ ಕೋಟೆಗಳು, ಕಲಾಗುರು ಆರ್. ಎಂ. ಹಡಪದ್. ಇವರಿಂದ ಸಂಪಾದಿತಗೊಂಡಿರುವ ಕೃತಿಗಳೆಂದರೆ ಹಸ್ತಪ್ರತಿ ಅಧ್ಯಯನ ಸಂಪುಟ 1 (2012), ಹಸ್ತಪ್ರತಿ ಅಧ್ಯಯನ ಸಂಪುಟ 2 (2013), ಕೈದಾಳ {ಡಾ.ಕೆ.ಆರ್. ಗಣೇಶ್ ಅಭಿನಂದನಾ ಗ್ರಂಥ} (2012), ಕರ್ನಾಟಕ ಜೈನ ಶಾಸನಗಳು ಸಂ 1, 2, 3 (2018),
ಸ್ಪರ್ಧಾಚೈತ್ರ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಅನುಭವವೂ ಇವರಿಗಿದೆ. ಪ್ರಸ್ತುತ ತುಮಕೂರಿನ ಡಾ. ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದಲ್ಲಿ ಡಾ. ಡಿ. ವಿ. ಪರಮಶಿವಮೂರ್ತಿ ಅವರ ಮಾರ್ಗದರ್ಶನದಲ್ಲಿ “ಕರ್ನಾಟಕ ಶಾಸನಾಧ್ಯಯನಗಳ ತಾತ್ವಿಕ ವಾಗ್ವಾದಗಳು-ಒಂದು ವಿಮರ್ಶಾತ್ಮಕ ಅಧ್ಯಯನ” ಎಂಬ ವಿಷಯದ ಮೇಲೆ ಸಂಶೋಧನ ಮಹಾಪ್ರಬಂಧವನ್ನು ಸಿದ್ದಪಡಿಸುತ್ತಿದ್ದಾರೆ. ಈಗ ಕೆ.ಆರ್. ಪುರಂನಲ್ಲಿರುವ ಸಿಲಿಕಾನ್ ಸಿಟಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇತಿಹಾಸ ದರ್ಪಣದ ಆರಂಭದ ಸಂಚಿಕೆಯಿಂದಲೂ ನಮ್ಮೊಡನಿದ್ದಾರೆ.

ಡಾ. ಶಿವಕುಮಾರಿ ಎಂ.ಎಸ್.

ಉಪ ಸಂಪಾದಕರು

ಶಿವಕುಮಾರಿ ಎಂ.ಎಸ್.: (ಜ.1983) ಮೂಲತಃ ಚನ್ನಪಟ್ಟಣದ ಮಂಗಳವಾರ ಪೇಟೆಯವರು. ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪೂರೈಸಿದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿಯನ್ನು ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ M.Phil ಮತ್ತು Ph.d ಪದವಿಯನ್ನು ಪಡೆದಿರುತ್ತಾರೆ. ರಾಜ್ಯಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಸಿದ್ದಾರೆ. ವಿದ್ವತ್ಪೂರ್ಣ ಪತ್ರಿಕೆಗಳಲ್ಲಿ ಕೆಲವು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುತ್ತಾರೆ. ಪ್ರಸ್ತುತ ಎಸ್.ಎಲ್.ಎನ್. ಮಹಾವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಡಾ. ರಶ್ಮಿ ಎಸ್.

ಉಪ ಸಂಪಾದಕರು

ರಶ್ಮಿ ಎಸ್: ಮೂಲತಃ ಮೈಸೂರು ಸಮೀಪದ ಮೂಗೂರಿನವರು. ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪೂರೈಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಮೂಲಕ ಎಂ.ಎ. ಪದವಿ, ಕನ್ನಡ ವಿಶ್ವವಿದ್ಯಾಲಯ, ಹಂಪಿಯಿಂದ ಪಿಎಚ್.ಡಿ ಪದವಿ ಪಡೆದಿದ್ದಾರೆ. ಹಿಂದಿ ರತ್ನ, ಎಪಿಗ್ರಫಿಯಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ.

ಪುಸ್ತಕಗಳು : ಗೋಪಾಲಕೃಷ್ಣ ಗೋಖಲೆ (೨೦೧೧), ತುರ್ತುಪರಿಸ್ಥಿತಿ: ಪ್ರಭಾವ ಮತ್ತು ಪರಿಣಾಮಗಳು (೨೦೧೮). 15ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುತ್ತಾರೆ.